ಗೀತೆ – 108 : ಯಜ್ಞಪರಂಪರೆಯು ಸಾಧಕನನ್ನು ಜ್ಞಾನದೊಳಗೆ ಹೇಗೆ ಕರೆದುಕೊಂಡು ಹೋಗುತ್ತದೆ

Gitacharya
Spread the love

ಶ್ರೀ ಮದ್ಭಗವದ್ಗೀತಾ : 108

33. ಶ್ರೇಯಾನ್ ದ್ರವ್ಯಮಯಾದ್ಯಜ್ಞಾತ್ ಜ್ಞಾನಯಜ್ಞಃ ಪರಂತಪ!। ಸರ್ವಂ ಕರ್ಮಾಖಿಲಂ ಪಾರ್ಥ! ಜ್ಞಾನೇ ಪರಿಸಮಾಪ್ಯತೇ॥

ಪರಂತಪ = ಶತ್ರುಗಳನ್ನು ಜಯಿಸುವ ಅರ್ಜುನನೆ!, ದ್ರವ್ಯಮಯಾತ್‌ = ಆಯಾ ದ್ರವ್ಯಗಳಿಂದ ಆಚರಿಸುವ, ಯಜ್ಞಾತ್‌ = ಯಜ್ಞಕ್ಕಿಂತಲೂ, ಜ್ಞಾನಯಜ್ಞಃ = ಜ್ಞಾನರೂಪವಾದ ಯಜ್ಞವು, ಶ್ರೇಯಾನ್‌ = ಹೆಚ್ಚು ಶ್ರೇಷ್ಠವಾದದ್ದು. ಪಾರ್ಥ = ಎಲೈ ಕುಂತೀಪುತ್ರನೆ!, ಸರ್ವಂ = ಸಮಸ್ತವಾದ, ಕರ್ಮ = ವಿಹಿತಕರ್ಮವು, ಅಖಿಲಂ = ಯಾವ ವಿಘ್ನಗಳೂ ಇಲ್ಲದೆ, ಜ್ಞಾನೇ = ಜ್ಞಾನದಲ್ಲಿ, ಪರಿಸಮಾಪ್ಯತೇ = ಅಂತರ್ಭಾಗವಾಗಿ ಹೋಗುತ್ತಿದೆ.

ಅರ್ಜುನನೆ! ಹೋಮಗಳಿಗೋಸ್ಕರ ವಿನಿಯೋಗಿಸುವ ಆಜ್ಯವು, ಸಮಿತ್ತುಗಳು, ಪರೋಪಕಾರಕ್ಕೋಸ್ಕರ ವಿನಿಯೋಗಿಸುವ ಧನಧಾನ್ಯಾದಿಗಳು, ಮೊದಲಾದ ಪದಾರ್ಥಗಳಿಂದ ನಿರ್ವಹಿಸುವ ಯಜ್ಞವಾವುದಾದರೂ
ಸರಿಯೇ, ಯಾವುದೋ ಒಂದು ಫಲಿತವನ್ನು ಕೊಟ್ಟು ತೀರುತ್ತದೆ. ಆ
ಫಲಿತವನ್ನು ಅನುಭವಿಸಲು ಸಾಧಕನು ಪುನರ್ಜನ್ಮವನ್ನು ಎತ್ತಬೇಕಾಗಿ ಬರುತ್ತದೆ. ಜ್ಞಾನಯಜ್ಞವು ಅಂತಹ ಯಾವ ಫಲಿತಗಳನ್ನೂ ಕೊಡದು. ಅಂದರೆ, ಪುನರ್ಜನ್ಮವನ್ನು ಉಂಟುಮಾಡದು. ಅದಕ್ಕಾಗಿಯೇ, ದ್ರವ್ಯಯಜ್ಞಕ್ಕಿಂತಲೂ ಜ್ಞಾನಯಜ್ಞವು ಬಹಳ ದೊಡ್ಡದು. ಇದರ ದೊಡ್ಡತನಕ್ಕೆ ಮತ್ತೊಂದು ಕಾರಣವು ಕೂಡ ಇದೆ. ಆಯಾ ವೇದೋಕ್ತಕರ್ಮಗಳನ್ನು ಆಚರಿಸುವುದರಿಂದ ಯಾವ ಯಾವ ಪುಣ್ಯವು ಲಭಿಸುವುದೋ ಆ ಪುಣ್ಯಗಳೆಲ್ಲವೂ ಜ್ಞಾನದಲ್ಲಿ ಚಿಕ್ಕ ಅಂತರ್ಭಾಗಗಳು ಮಾತ್ರವೇ ಆಗಿಹೋಗುತ್ತವೆ. ಈ ವಿಷಯವನ್ನು ನಿನಗೆ 2ನೆಯ ಅಧ್ಯಾಯದ 46ನೆಯ ಶ್ಲೋಕದಲ್ಲಿಯೇ
“”ಸರ್ವತಃ ಸಂಪ್ಲುತೋದಕೇ” ಎಂಬಲ್ಲಿ ವಿವರಿಸಿದ್ದೇನೆ.
ವಿವರಣೆ:
ಇಲ್ಲಿಯವರೆಗೂ ಮುಂದುವರೆದ ಯಜ್ಞವರ್ಣನೆಗಳ ಹಿಂದೆ, ಇದೇ ಅಧ್ಯಾಯದ 24ನೆಯ ಶ್ಲೋಕದಲ್ಲಿ “”ಬ್ರಹ್ಮಾರ್ಪಣಂ ಬ್ರಹ್ಮ ಹವಿಃ” ಎಂದು ಕರ್ಮಯಜ್ಞಗಳಿಗೂ ಪರಮಲಕ್ಷ್ಯವು ಪರಬ್ರಹ್ಮವೇ ಎಂದು ಹೇಳಿರುತ್ತಾನೆ. ಅಷ್ಟೇ ಅಲ್ಲದೆ ಸಾಕ್ಷಾತ್ತಾಗಿ ಬ್ರಹ್ಮಪ್ರಾಪ್ತಿ ಎಂಬುದು ಜ್ಞಾನದಿಂದ ಮಾತ್ರವೇ ಲಭಿಸುತ್ತದೆ ಎಂದು 2ನೆಯ ಅಧ್ಯಾಯ, 49ನೆಯ ಶ್ಲೋಕದಲ್ಲಿ “”ಬುದ್ಧೌ ಶರಣಮನ್ವಿಚ್ಛ” ಎಂಬಲ್ಲಿ ವಿವರಿಸಿರುತ್ತಾನೆ. ಆದ್ದರಿಂದ ಪ್ರಸ್ತುತ ಯಜ್ಞಪರಂಪರೆಯು ಸಾಧಕನನ್ನು ಜ್ಞಾನದೊಳಗೆ ಹೇಗೆ ಕರೆದುಕೊಂಡು ಹೋಗುತ್ತದೆಯೋ ಭಗವಂತನು ಇಲ್ಲಿ ವಿವರಿಸಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ