ಗೀತೆ – 107 : ಮೋಕ್ಷ ಪ್ರಾಪ್ತಿ ವಿಧಾನದ ವರ್ಣನೆ

Gitacharya
Spread the love

ಶ್ರೀ ಮದ್ಭಗವದ್ಗೀತಾ : 107

32. ಏವಂ ಬಹುವಿಧಾ ಯಜ್ಞಾಃ ವಿತತಾ ಬ್ರಹ್ಮಣೋ ಮುಖೇ।
ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಂ ಜ್ಞಾತ್ವಾ ವಿಮೋಕ್ಷ್ಯಸೇ॥

ಏವಂ = ಈ ವಿಧವಾಗಿ, ಬಹುವಿಧಾಃ = ನಾನಾ ಬಗೆಯ, ಯಜ್ಞಾಃ = ಯಜ್ಞಗಳು, ಬ್ರಹ್ಮಣಃ = ವೇದದ, ಮುಖೇ = ಮುಖದಿಂದ, ವಿತತಾಃ = ವಿಸ್ತರಿಸಿ ಹೇಳಲ್ಪಟ್ಟಿವೆ. ತಾನ್‌-ಸರ್ವಾನ್‌ = ಅವುಗಳೆಲ್ಲವನ್ನೂ, ಕರ್ಮಜಾನ್‌ = ಮನೋವಾಕ್ಕಾಯಗಳ ಕರ್ಮಗಳಿಂದ ಹುಟ್ಟಿದವುಗಳಾಗಿ, ವಿದ್ಧಿ = ತಿಳಿದುಕೋ. ಏವಂ = ಈ ವಿಧವಾಗಿ, ಜ್ಞಾತ್ವಾ = ತಿಳಿದುಕೊಂಡು, ವಿಮೋಕ್ಷ್ಯಸೇ = ಬೇಗನೆ ಮುಕ್ತಿಯನ್ನು ಪಡೆಯಬಲ್ಲೆ.

ಅರ್ಜುನನೆ! ವೇದಗಳಲ್ಲಿ ಎಷ್ಟೋ ಕಡೆ ನಾನು ಮೇಲೆ ಹೇಳಿದವುಗಳು ಮಾತ್ರವಲ್ಲದೆ ಇನ್ನೂ ಎಷ್ಟೋ ತರಹದ ಯಜ್ಞಗಳು ಹೇಳಲ್ಪಟ್ಟಿವೆ. ಇವೆಲ್ಲವೂ ಕರ್ಮಸ್ವರೂಪಗಳೇ ಆಗಿವೆ. ಏಕೆಂದರೆ, ಇವುಗಳನ್ನು ಆಚರಿಸಬೇಕಾದರೆ, ಶರೀರಕ್ಕೆ ಸಂಬಂಧಿಸಿದ ಕರ್ಮದಲ್ಲಿ, ವಾಕ್ಕಿಗೆ ಸಂಬಂಧಿಸಿದ ಕರ್ಮದಲ್ಲಿ, ಮನಸ್ಸಿಗೆ ಸಂಬಂಧಿಸಿದ ಕರ್ಮದಲ್ಲಿ, ಹೀಗೆ ಯಾವುದೋ ಒಂದು ತರಹದ ಕರ್ಮವು ನಡೆಯಲೇಬೇಕಾಗಿದೆ. ಮನೋವಾಕ್ಕಾಯಗಳೆಂಬುವುವು ಪರಮಾತ್ಮನಿಗೆ ಭಿನ್ನವಾದ ಅನಾತ್ಮಪದಾರ್ಥಗಳು. ಅನಾತ್ಮಪದಾರ್ಥಗಳಿಂದ ಬಂದ ಕರ್ಮಗಳು ಕೂಡ ಅನಾತ್ಮಪದಾರ್ಥಗಳೇ ಆಗಿರುತ್ತವೆ. ಮತ್ತೆ ನಿನ್ನ ನಿಜವಾದ ಆತ್ಮವೋ? ಅದು ಪೂರ್ತಿಯಾಗಿ ಸ್ಪಂದರಹಿತವಾದದ್ದು. ಅಂದರೆ ಅಕರ್ಮಸ್ವರೂಪವು. ಹೀಗೆ “”ನಾನು ಅಕರ್ಮಸ್ವರೂಪನು” ಎಂದು ನೋಡಬಲ್ಲದ್ದರ ಹೆಸರೇ ಸಮ್ಯಗ್ದರ್ಶನವು. ಇಂತಹ ನೋಟವನ್ನು ಸಾಧಿಸಿದರೆ, ನಿನಗೆ ತಕ್ಷಣವೇ ಮೋಕ್ಷವು ಸಿದ್ಧಿಸಬಲ್ಲದು.
ವಿವರಣೆ:
ಕರ್ಮಾಕರ್ಮಗಳ ಏಕತ್ವಸೂತ್ರವನ್ನು ವಿವರಿಸುವ ಸಂದರ್ಭದಲ್ಲಿ ವಿವಿಧ ಯಜ್ಞಗಳ ವರ್ಣನೆಯ ಪ್ರಸಕ್ತಿಯು ಬಂದಿರುವುದಾದ್ದರಿಂದ ಇನ್ನು ಯಜ್ಞವರ್ಣನೆಯನ್ನು ಆ ಸೂತ್ರದೊಳಕ್ಕೇ ಸಮನ್ವಯಮಾಡುತ್ತಾ, ಈ ಯಜ್ಞಗಳೆಲ್ಲವೂ ಕ್ರಮಕ್ರಮವಾಗಿ ಮುಕ್ತಿಯನ್ನು ಪ್ರಸಾದಿಸುವುವಂತಹವೇ ಆಗಿವೆ ಎಂದು ಸೂಚಿಸುತ್ತಾ, ಈ ಶ್ಲೋಕದಲ್ಲಿ ತಕ್ಷಣ ಮೋಕ್ಷಪ್ರಾಪ್ತಿಯ ವಿಧಾನವನ್ನು ಬೋಧಿಸುತ್ತಿದ್ದಾನೆಂದು ನಾವು ಗುರುತಿಸಬೇಕು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ