ಶ್ರೀ ಮದ್ಭಗವದ್ಗೀತಾ : 106
31. ಯಜ್ಞಶಿಷ್ಟಾಮೃತಭುಜಃ ಯಾಂತಿ ಬ್ರಹ್ಮ ಸನಾತನಮ್।
ನಾಯಂ ಲೋಕೋಽಸ್ತ್ಯಯಜ್ಞಸ್ಯ ಕುತೋಽನ್ಯಃ ಕುರುಸತ್ತಮ!॥
ಕುರುಸತ್ತಮ = ಕುರುವಂಶದಲ್ಲಿ ಶ್ರೇಷ್ಠನಾದವನೆ!, ಯಜ್ಞಶಿಷ್ಠ-ಅಮೃತಭುಜಃ = ಯಜ್ಞವಾದ ಮೇಲೆ ಮಿಕ್ಕ ಅಮೃತಪ್ರಸಾದವನ್ನು ತಿನ್ನುವವರು, ಸನಾತನಂ = ಶಾಶ್ವತವಾದ, ಬ್ರಹ್ಮ = ಪರಬ್ರಹ್ಮನನ್ನು, ಯಾಂತಿ = ಹೊಂದುತ್ತಾರೆ. ಅಯಜ್ಞಸ್ಯ = ಯಾವ ಯಜ್ಞವೂ ಇಲ್ಲದವನಿಗೆ, ಅಯಂ-ಲೋಕಃ = ಈ ಮಾನವಲೋಕವೇ, ನ-ಅಸ್ತಿ = ಇಲ್ಲ. ಅನ್ಯಃ = ಇತರ ಸ್ವರ್ಗಾದಿಲೋಕವು, ಕುತಃ = ಎಲ್ಲಿಂದ ಬರುವುದು?
ಅರ್ಜುನನೆ! ನಾನು ಈಗ ಹೇಳಿದ ಯಜ್ಞಗಳಲ್ಲಿ ಕೆಲವು ದ್ರವ್ಯಸಹಿತ ಯಜ್ಞಗಳೂ ಇವೆ. ಅವುಗಳಲ್ಲಿ ಯಜ್ಞಾನಂತರ ಉಳಿದ ಪ್ರಸಾದವನ್ನು “ಅಮೃತವು’ ಎನ್ನುತ್ತಾರೆ. ದ್ರವ್ಯರಹಿತ ಯಜ್ಞಗಳ ವಿಷಯದಲ್ಲಿ ಆ ಹೊತ್ತಿಗೆ ಯಜ್ಞಾಚರಣೆಯು ಪೂರ್ತಿಯಾದ ಮೇಲೆ ಸಾಧಕನು ತೆಗೆದುಕೊಳ್ಳುವ ಆಹಾರವನ್ನೇ “ಅಮೃತವು’ ಅನ್ನುತ್ತಾರೆ. ಇಂತಹ ಅಮೃತವನ್ನೇ ನಿತ್ಯಾಹಾರವಾಗಿ ತೆಗೆದುಕೊಳ್ಳುವವನು ಸಕಾಮವಾಗಿ ಯಜ್ಞಾಚರಣೆಯನ್ನು ಮಾಡಿದರೆ, ತನ್ನ ಕೋರಿಕೆಗಳನ್ನು ಸಾಧಿಸಿಕೊಳ್ಳಬಲ್ಲವನಾಗುತ್ತಾನೆ. ಮೋಕ್ಷಕಾಮದಿಂದ ಯಜ್ಞ ಮಾಡಿದರೆ, ಆತನು ಚಿತ್ತಶುದ್ಧಿಯಿಂದ ಬ್ರಹ್ಮಲೋಕದವರೆಗೂ ಪ್ರಯಾಣ ಮಾಡಿ, ಅಲ್ಲಿ ಜ್ಞಾನಸಿದ್ಧಿಯನ್ನು ಪಡೆದು ಮೋಕ್ಷವನ್ನು ಪಡೆಯುತ್ತಾನೆ. ಈಗ ನಾನು ಹೇಳಿದ ಯಜ್ಞಗಳಲ್ಲಿ ಒಂದಾಗಲೀ, ಅದಕ್ಕಿಂತಲೂ ಹೆಚ್ಚಾಗಲೀ, ಸಾಧ್ಯವಾದರೆ ಎಲ್ಲವನ್ನಾಗಲೀ ಆಚರಿಸುವವರು ಮೇಲೆ ಹೇಳಿದ ಫಲಿತಗಳನ್ನು ಇನ್ನಷ್ಟು ಬೇಗನೆ ಪಡೆದುಕೊಳ್ಳುತ್ತಾರೆ. ಹಾಗಲ್ಲದೆ, ಯಾವ ಯಜ್ಞವೂ ಇಲ್ಲದೆ ಸ್ವಾರ್ಥದಿಂದ ತುಂಬಿದ ಜೀವನವನ್ನು ಸಾಗಿಸುವವರಿಗೆ, ಮುಂದಿನ ಜನ್ಮದಲ್ಲಿ ಕನಿಷ್ಠ ಮಾನವಲೋಕದ ಸುಖಗಳು ಕೂಡ ದೊರಕವು. ಇನ್ನು ಅದಕ್ಕಿಂತಲೂ ಮೇಲಿನವುಗಳಾದ ಸ್ವರ್ಗಲೋಕಾದಿ ಸುಖಗಳು ಹೇಗೆ ದೊರಕುತ್ತವೆ?
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ