ಶ್ರೀ ಮದ್ಭಗವದ್ಗೀತಾ : 105
30. ಅಪರೇ ನಿಯತಾಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ।
ಸರ್ವೇಽಪ್ಯೇತೇ ಯಜ್ಞವಿದಃ ಯಜ್ಞ-ಕ್ಷಪಿತ-ಕಲ್ಮಷಾಃ ॥
ಅಪರೇ = ಇನ್ನು ಕೆಲವರು ಯೋಗಿಗಳು, ನಿಯತಾಹಾರಾಃ = ಪರಿಮಿತವಾದ, ಪವಿತ್ರವಾದ, ಆಹಾರವುಳ್ಳವರಾಗಿ, ಪ್ರಾಣಾನ್ = ತಮ್ಮ ದಶವಿಧ ವಾಯುವುಗಳನ್ನು, ಅಥವಾ ದಶೇಂದ್ರಿಯಗಳನ್ನು, ಪ್ರಾಣೇಷು = ಆಯಾ ವಾಯುವುಗಳಲ್ಲಿ, ಅಥವಾ, ಇಂದ್ರಿಯಗಳಲ್ಲಿ, ಜುಹ್ವತಿ = ಹೋಮ ಮಾಡುತ್ತಿದ್ದಾರೆ. ಏತೇ-ಸರ್ವೇ-ಅಪಿ = ಇವರೆಲ್ಲರೂ ಕೂಡ, ಯಜ್ಞವಿದಃ = ಯಜ್ಞದ ತತ್ತ್ವವು ತಿಳಿದವರೇ ಆಗಿದ್ದಾರೆ. ಯಜ್ಞಕ್ಷಪಿತಕಲ್ಮಷಾಃ = ಯಜ್ಞಗಳಿಂದ ಪಾಪಗಳನ್ನು ಹೋಗಲಾಡಿಸಿಕೊಂಡವರೇ ಆಗಿದ್ದಾರೆ.
ಅರ್ಜುನನೆ! ಇನ್ನು ಕೆಲವರು ಯೋಗಿಗಳು ತಮ್ಮ ದಶವಿಧ ಪ್ರಾಣವಾಯುವುಗಳಲ್ಲಿ ಮೊದಲು ಕೆಲವನ್ನು ಜಯಿಸಿ, ಉಳಿದವುಗಳನ್ನು ಕ್ರಮಕ್ರಮವಾಗಿ ಅವುಗಳೊಂದಿಗೆ ಸೇರಿಸಿಬಿಡುತ್ತಿದ್ದಾರೆ. ಅಂದರೆ, ಅವುಗಳನ್ನು ಕೂಡಾ ಜಯಿಸುತ್ತಿದ್ದಾರೆ. ಇದು ಕೂಡ ಒಂದು ಯಜ್ಞವೇ. ಇನ್ನು ಕೆಲವರು ಯೋಗಿಗಳು ತಮ್ಮ ಹತ್ತು ವಿಧವಾದ ಇಂದ್ರಿಯಗಳಲ್ಲಿ ಮೊದಲು ಕೆಲವನ್ನು ಜಯಿಸಿ, ಅವುಗಳಲ್ಲಿ ಉಳಿದ ಇಂದ್ರಿಯಗಳನ್ನು ಕ್ರಮಕ್ರಮವಾಗಿ ಸೇರಿಸಿಬಿಡುತ್ತಿದ್ದಾರೆ. ಅಂದರೆ, ಅವುಗಳನ್ನು ಕೂಡಾ ಜಯಿಸುತ್ತಿದ್ದಾರೆ. ಇದು ಕೂಡಾ ಒಂದು ಯಜ್ಞವೇ.
ಇಲ್ಲಿಯವರೆಗೂ ನಿನಗೆ 16 ವಿಧವಾದ ಯಜ್ಞಗಳನ್ನು ಹೇಳಿದ್ದೇನೆ. ಇವುಗಳೆಲ್ಲದಕ್ಕೂ ಕೂಡ ನಿಯಮಬದ್ಧವಾದ ಆಹಾರ ಸ್ವೀಕರಣೆ ಮುಖ್ಯ.
ಇಲ್ಲಿ ಆಹಾರವೆಂದರೆ, ಬಾಯಿಂದ ತೆಗೆದುಕೊಂಡು ಭುಜಿಸುವ ಆಹಾರವು ಮಾತ್ರವೇ ಅಲ್ಲ. ಯಾವ ಇಂದ್ರಿಯವು ಯಾವ ವಿಷಯವನ್ನು ಗ್ರಹಿಸುವುದೋ, ಅದು ಅದಕ್ಕೆ ಆಹಾರವು. ಈ ಆಹಾರವು ಪರಿಮಿತವಾಗಿಯೂ, ಪವಿತ್ರವಾಗಿಯೂ ಇರಬೇಕು. ಆಗಲೇ ಯಾವ ಯಜ್ಞವಾದರೂ ಸಿದ್ಧಿಸುವುದು.
ಈ ಹದಿನಾರರಲ್ಲಿಯೂ ಒಂದಾಗಲೀ, ಅದಕ್ಕಿಂತ ಹೆಚ್ಚಾಗಲೀ, ಯಜ್ಞಗಳನ್ನು ಆಚರಿಸುವವರು ಯಾರಾದರೂ ಸರಿಯೇ, ಅವರು ಯಜ್ಞತತ್ತ್ವವೇತ್ತರೇ ಆಗಿದ್ದಾರೆ. ಈ ಎಲ್ಲ ಯಜ್ಞಗಳಿಗೂ ಪ್ರಧಾನಫಲಿತವು ಪಾಪಕ್ಷಯವೇ ಆಗಿದೆ. ಅದರಿಂದ ಯಜ್ಞಕರ್ತನಿಗೆ ಕೋರಿದ ಕೋರಿಕೆಯು ತೀರುತ್ತದೆ. ಮೋಕ್ಷಕಾಮಿಗಳಿಗೆ ಅದರಿಂದ ಚಿತ್ತಶುದ್ಧಿಯು, ತದ್ದ್ವಾರಾ ಜ್ಞಾನಸಿದ್ಧಿಯು, ತನ್ಮೂಲಕ ಮೋಕ್ಷಪ್ರಾಪ್ತಿಯು ಕೂಡಾ ಆಗುತ್ತವೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ