ಶ್ರೀ ಮದ್ಭಗವದ್ಗೀತಾ : 104
29. ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಽಪಾನಂ ತಥಾಽಪರೇ।
ಪ್ರಾಣಾಪಾನಗತೀ ರುಧ್ವಾ ಪ್ರಾಣಾಯಾಮ ಪರಾಯಣಾಃ॥
ಅಪರೇ = ಇನ್ನು ಕೆಲವರು ಯೋಗಿಗಳು, ಅಪಾನೇ = ಅಪಾನವಾಯುವಲ್ಲಿ, ಪ್ರಾಣಂ= ಪ್ರಾಣವಾಯುವನ್ನು, ಜುಹ್ವತಿ = ಹೋಮ ಮಾಡುತ್ತಿದ್ದಾರೆ. ತಥಾ = ಹಾಗೆಯೇ, ಮತ್ತು ಕೆಲವರು ಯೋಗಿಗಳು, ಪ್ರಾಣೇ = ಪ್ರಾಣವಾಯುವಲ್ಲಿ, ಅಪಾನಂ = ಅಪಾನವಾಯುವನ್ನು ಹೋಮ ಮಾಡುತ್ತಿದ್ದಾರೆ. ಪ್ರಾಣಾಪಾನಗತೀಃ = ಇನ್ನು ಕೆಲವರು ಯೋಗಿಗಳು, ಪ್ರಾಣಶಕ್ತಿಯ, ಅಪಾನಶಕ್ತಿಯ, ಗಮನಾಗಮನಗಳನ್ನು, ರುದ್ಧ್ವಾ = ನಿರೋಧಿಸಿ, ಪ್ರಾಣಾಯಾಮ ಪರಾಯಣಾಃ = ಪ್ರಾಣಾಯಾಮದಲ್ಲಿ ಆಸಕ್ತಿಯುಳ್ಳವರಾಗುತ್ತಿದ್ದಾರೆ.
ಅರ್ಜುನನೆ! ಪ್ರಾಣಾಗ್ನಿಯು, ಪ್ರಾಣವಾಯುವು, ಎಂಬ ಪರಿಭಾಷೆಗಳು ನಿನಗೆ ಗೊತ್ತಿವೆಯಲ್ಲವೇ! ಇವುಗಳಲ್ಲಿ ಪ್ರಾಣವಾಯುವೆಂಬ ಪರಿಭಾಷೆಯನ್ನು ತೆಗೆದುಕೊಂಡರೆ, ಆಕಾಶದಲ್ಲಿ ನಮ್ಮ ಸುತ್ತಲೂ ತಿರುಗುವ ಮಾಮೂಲು ವಾಯುವಿನ ಹೆಸರು “ಅಪಾನವು’ ಅಂದರೆ “ಅಪ+ಅನಂ’ (ಪ್ರಾಣಶಕ್ತಿ ಇಲ್ಲದ್ದು). ಇಂತಹ ಮಾಮೂಲು ಗಾಳಿಯು ಮೂಗಿನ ಹೊಳ್ಳೆಗಳಿಂದ ಶ್ವಾಸಕೋಶಗಳಲ್ಲಿ ಪ್ರವೇಶಿಸಿ, ಅಲ್ಲಿರುವ ಪ್ರಾಣಶಕ್ತಿಯೊಂದಿಗೆ ಸಂಗಮಿಸಿ, ಪ್ರಾಣವಾಯುವಾಗಿ ಬದಲಾಗುತ್ತದೆ. ಅಂತಹ ಪ್ರಾಣವಾಯುವು ಮತ್ತೆ ಮೂಗಿನಿಂದ ಹೊರಕ್ಕೆ ಬಂದು ಹೊರಗಿರುವ ಅಪಾನವಾಯುವಲ್ಲಿ ಸೇರಿಬಿಡುತ್ತದೆ. ಹಾಗಾಗಿ ಹೊರಗಿನ ವಾಯುವನ್ನು ಒಳಕ್ಕೆ ಪೂರಣಮಾಡಿ, ಒಳಗಡೆಯೇ ಅಂತಃಕುಂಭಕ ಮಾಡುತ್ತಿರುವ ಯೋಗಿಯು ಅಪಾನವಾಯುವಿಗೆ ಪ್ರಾಣತ್ವವನ್ನು ಉಂಟುಮಾಡುತ್ತಿದ್ದಾನೆ. ಇದನ್ನೇ ಜ್ಞಾನದೃಷ್ಟಿಯಿರುವ ಯೋಗಿಗಳು ಅಪಾನಯಜ್ಞವನ್ನಾಗಿ ಭಾವಿಸುತ್ತಿದ್ದಾರೆ.
ಇನ್ನು ಕೆಲವರು ಯೋಗಿಗಳು ಒಳಗಿರುವ ಪ್ರಾಣವಾಯುವನ್ನು
ಮೂಗಿನ ಹೊಳ್ಳೆಗಳಿಂದ ಹೊರಕ್ಕೆ ರೇಚನ ಮಾಡಿ, ಬಹಿಃಕುಂಭಕ ಮಾಡುತ್ತಿದ್ದಾರೆ. ಅಂದರೆ, ಇವರು ಪ್ರಾಣವಾಯುವಿಗೆ ಅಪಾನವಾಯುತ್ವವನ್ನು ಉಂಟುಮಾಡುತ್ತಿದ್ದಾರೆ. ಇವರಲ್ಲಿ ಜ್ಞಾನದೃಷ್ಟಿಯುಳ್ಳವರು ಇದನ್ನು ಪ್ರಾಣಯಜ್ಞವನ್ನಾಗಿ ಭಾವಿಸುತ್ತಿದ್ದಾರೆ. ಪ್ರಾಣಾಯಾಮಾಭ್ಯಾಸದ ಪರಿಪಾಕದಿಂದ ಹೃದಯಸ್ಥಾನದಲ್ಲಿರುವ ಪ್ರಾಣಶಕ್ತಿಯನ್ನೂ, ಗುದಸ್ಥಾನದಲ್ಲಿರುವ ಅಪಾನಶಕ್ತಿಯನ್ನೂ, ಗುರುತಿಸಬಲ್ಲ ಯೋಗಿಗಳು, ಪ್ರಾಣಶಕ್ತಿಯ ಊರ್ಧ್ವಗತಿಯನ್ನೂ, ಅಪಾನಶಕ್ತಿಯ ಅಧೋಗತಿಯನ್ನೂ ಕೂಡ ಗಮನಿಸಿ, ಅವುಗಳ ಗಮನಾಗಮನಗಳ ಮೇಲೆ ಹತೋಟಿಯನ್ನು ಸಂಪಾದಿಸಿ ಗಂಭೀರವಾದ ಪ್ರಾಣಾಯಾಮಪ್ರಕ್ರಿಯೆಗಳಿಂದ ಮುಂದಕ್ಕೆ ಸಾಗಿ, ಪ್ರಾಣಾಪಾನಗಳ ಏಕತ್ವವನ್ನು ಸಾಧಿಸುತ್ತಾರೆ. ಪ್ರಾಣಾಪಾನಶಕ್ತಿಗಳು ಶುದ್ಧಚೈತನ್ಯದ ಹೊರಗಿನ ರೂಪಗಳೇ ಆದ್ದರಿಂದ ಈ ಯೋಗಪ್ರಕ್ರಿಯೆ ಕೂಡ ಒಂದು ಜ್ಞಾನಯಜ್ಞವೇ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ