ಶ್ರೀ ಮದ್ಭಗವದ್ಗೀತಾ – 103
28. ದ್ರವ್ಯಯಜ್ಞಾಸ್ತಪೋಯಜ್ಞಾಃ ಯೋಗಯಜ್ಞಾ ಸ್ತಥಾಽಪರೇ। ಸ್ವಾಧ್ಯಾಯ-ಜ್ಞಾನಯಜ್ಞಾಶ್ಚ ಯತಯ ಸ್ಸಂಶಿತವ್ರತಾಃ॥
ಅಪರೇ = ಇನ್ನು ಕೆಲವರು, ಯತಯಃ = ಕಷ್ಟಪಟ್ಟು ಕೃಷಿ ಮಾಡುವವರೂ, ಸಂಶಿತವ್ರತಾಃ = ತೀವ್ರವಾದ ನಿಯಮಗಳುಳ್ಳವರೂ, (ಆದ ಸಾಧಕರು), ದ್ರವ್ಯಯಜ್ಞಾಃ = ದಾನಾದಿರೂಪವಾದ ಯಜ್ಞ ಉಳ್ಳವರು ಆಗುತ್ತಿದ್ದಾರೆ. ತಪೋಯಜ್ಞಾಃ = ಇನ್ನು ಕೆಲವರು, ತಪಸ್ಸೇ ಯಜ್ಞವಾಗಿ ಉಳ್ಳವರು ಆಗುತ್ತಿದ್ದಾರೆ. ತಥಾ = ಹಾಗೆಯೇ ಇನ್ನು ಕೆಲವರು, ಯೋಗಯಜ್ಞಾಃ = ಪ್ರಾಣಾಯಾಮಾದಿರೂಪವಾದ ಯೋಗವೇ ಯಜ್ಞವಾಗಿ ಉಳ್ಳವರು ಆಗುತ್ತಿದ್ದಾರೆ. ಚ = ಮತ್ತು ಕೆಲವರು, ಸ್ವಾಧ್ಯಾಯ ಜ್ಞಾನಯಜ್ಞಾಃ = ಮಂತ್ರಜಪಾದಿಗಳೇ ಯಜ್ಞವಾಗಿ ಉಳ್ಳವರು, ಅಥವಾ ಜ್ಞಾನಾಭ್ಯಾಸರೂಪವಾದ ತಪಸ್ಸುಳ್ಳವರು, ಆಗುತ್ತಿದ್ದಾರೆ.
ಅರ್ಜುನನೆ! ಕೆಲವರು ಧನಧಾನ್ಯಹಿರಣ್ಯಾದಿರೂಪವಾದ ಸಂಪತ್ತುಳ್ಳ ಸಾಧಕರು ತಮ್ಮ ದ್ರವ್ಯಗಳನ್ನು ನಿಸ್ವಾರ್ಥವಾಗಿ ಯೋಗ್ಯರಾದವರಿಗೆ ದಾನಮಾಡುವುದೆಂಬ ರೂಪದಲ್ಲಿ ಯಜ್ಞ ಮಾಡುತ್ತಿರುತ್ತಾರೆ. ಇನ್ನು ಕೆಲವರು ಏಕಾಂತವಾಗಿ ಮಾಡುವ ಭಗವದ್ಧ್ಯಾನಾದಿರೂಪವಾದ ತಪಸ್ಸನ್ನೇ ಯಜ್ಞವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಪ್ರಾಣಾಯಾಮಾದಿಗಳ ಅಭ್ಯಾಸರೂಪವಾದ ಯೋಗವನ್ನೇ ತಪಸ್ಸನ್ನಾಗಿ ಆಚರಿಸುತ್ತಿದ್ದಾರೆ. ಇನ್ನು ಕೆಲವರು ಸದ್ಗ್ರಂಥಪಠನೆಯು, ಮಂತ್ರಜಪಾದಿರೂಪವಾದ ಸ್ವಾಧ್ಯಾಯಯಜ್ಞವನ್ನೇ ಇಷ್ಟಪಟ್ಟು ಮಾಡುತ್ತಿದ್ದಾರೆ. ಇನ್ನೂ ಕೆಲವರು ಶ್ರವಣ ಮನನ ನಿದಿಧ್ಯಾಸಾದಿರೂಪವಾದ ಜ್ಞಾನಾಭ್ಯಾಸವನ್ನೇ ಯಜ್ಞವನ್ನಾಗಿ ಅನುಷ್ಠಿಸುತ್ತಿದ್ದಾರೆ. ಆದರೆ ಇವುಗಳೆಲ್ಲವೂ, ಯಜ್ಞಗಳು ಎಂದಿಗಾಗುವುವು ಎಂದರೆ ಇವರಿಗೆ ಬ್ರಹ್ಮಾರ್ಪಣಬುದ್ಧಿಯು ಇರಬೇಕು. ಅದರೊಂದಿಗೆ ಸೋಮಾರಿತನವಿಲ್ಲದೆ ಸಾಧನೆಯನ್ನು ಮುಂದುವರೆಸುವ ಗುಣವಿರಬೇಕು. ಅದರೊಂದಿಗೆ ಅತಿ ತೀವ್ರದಾದ ನಿಯಮಗಳನ್ನು ಸ್ವೀಕರಿಸುವ ಸಾಮರ್ಥ್ಯವಿರಬೇಕು. ಆಗಲೇ ಇವು ಯಜ್ಞಗಳಾಗುವುವು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ