ಶ್ರೀ ಮದ್ಭಗವದ್ಗೀತಾ : 101
26. ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ। ಶಬ್ದಾದೀನ್ ವಿಷಯಾನನ್ಯೇ ಇಂದ್ರಿಯಾಗ್ನಿಷು ಜುಹ್ವತಿ॥
ಅನ್ಯೇ = ಇನ್ನು ಕೆಲವರು (ಬ್ರಹ್ಮಚಾರಿಗಳು, ಸಂನ್ಯಾಸಿಗಳು), ಶ್ರೋತ್ರಾದೀನಿ = ಕಿವಿ ಮೊದಲಾದ, ಇಂದ್ರಿಯಾಣಿ = ಇಂದ್ರಿಯಗಳನ್ನು, ಸಂಯಮಾಗ್ನಿಷು = ಆಯಾ ಇಂದ್ರಿಯಗಳ ನಿಗ್ರಹಗಳೆಂಬ ಅಗ್ನಿಗಳಲ್ಲಿ, ಜುಹ್ವತಿ = ಆಹುತಿ ಮಾಡುತ್ತಿದ್ದಾರೆ. ಅನ್ಯೇ = ಇನ್ನು ಕೆಲವರು (ಗೃಹಸ್ಥರು), ಶಬ್ದಾದೀನ್ = ಶಬ್ದವು ಮೊದಲಾದ, ವಿಷಯಾನ್ = ವಿಷಯಗಳನ್ನು, ಇಂದ್ರಿಯಾಗ್ನಿಷು = ಇಂದ್ರಿಯಗಳೆಂಬ ಅಗ್ನಿಯಲ್ಲಿ, ಜುಹ್ವತಿ = ಆಹುತಿ ಮಾಡುತ್ತಿದ್ದಾರೆ.
ಅರ್ಜುನನೆ! ಯೋಗಶಾಸ್ತ್ರದಲ್ಲಿ ಧಾರಣ-ಧ್ಯಾನ-ಸಮಾಧಿಗಳ ಸಂಯುಕ್ತರೂಪವಾದ ಸಂಯಮವು ಅನ್ನಲ್ಪಡುವ ನಿಗ್ರಹಪ್ರಕ್ರಿಯೆಯು ನಿನಗೆ ಗೊತ್ತಲ್ಲವೇ! ನೈಷ್ಠಿಕಬ್ರಹ್ಮಚರ್ಯವನ್ನು ಪಾಲಿಸುವ ಬ್ರಹ್ಮಚಾರಿಗಳೂ, ಸಂನ್ಯಾಸಿಗಳೂ ಆದ ಯೋಗಿಗಳು ಕೆಲವರು, ಪಂಚೇಂದ್ರಿಯಸಂಯಮಗಳು ಎನ್ನುವ ಪ್ರಕ್ರಿಯೆಯನ್ನೇ ಯಜ್ಞರೂಪವಾಗಿ ನಿರ್ವಹಿಸುತ್ತಿರುತ್ತಾರೆ. ಅಂದರೆ, ಕರ್ಣೇಂದ್ರಿಯವನ್ನು ಕರ್ಣೇಂದ್ರಿಯಸಂಯಮದಲ್ಲಿ ಹೋಮ ಮಾಡುತ್ತಾರೆ. ಅಂದರೆ, ಕರ್ಣೇಂದ್ರಿಯದೊಳಗೆ ಯಾವ ವಿಧವಾದ ಶಬ್ದವೂ ಪ್ರವೇಶಿಸದ ಹಾಗೆ ನಿಗ್ರಹ ಮಾಡುತ್ತಾರೆ. ಹೀಗೆಯೇ ಬೇರೆ ಇಂದ್ರಿಯಗಳನ್ನು ಕೂಡ ಊಹಿಸಿಕೊಳ್ಳಬೇಕು. ಇದು ಒಂದು ವಿಧವಾದ ಯಜ್ಞಪ್ರಕ್ರಿಯೆಯು. ಗೃಹಸ್ಥರಾದ ಯೋಗಿಗಳು ಶಬ್ದಾದಿವಿಷಯಗಳನ್ನೇ ಸಮಿತ್ತುಗಳನ್ನಾಗಿ ಮಾಡಿ ಕಿವಿ ಮೊದಲಾದ ಇಂದ್ರಿಯಗಳೆಂಬ ಅಗ್ನಿಗಳಲ್ಲಿ ಹೋಮ ಮಾಡುತ್ತಾರೆ. ಅಂದರೆ, ಹೋಮ ಮಾಡುವವನು ಹೇಗಾದರೆ ಅಪವಿತ್ರವಾದ ಕಡ್ಡಿಗಳನ್ನು ತೆಗೆದುಹಾಕಿ ಪವಿತ್ರವಾದ ಪಾಲಾಶಸಮಿತ್ತುಗಳು ಮೊದಲಾದವುಗಳನ್ನೇ ಸಮರ್ಪಣಾಬುದ್ಧಿಯಿಂದ ಅಗ್ನಿಯಲ್ಲಿ ಆಹುತಿ ಮಾಡುವನೋ, ಹಾಗೆಯೇ ಗೃಹಸ್ಥಯೋಗಿಗಳು ಶಾಸ್ತ್ರಸಮ್ಮತವಾದ ವಿಷಯಗಳನ್ನು ಮಾತ್ರವೇ ಸ್ವೀಕರಿಸಿ, ಅವುಗಳನ್ನು ಒಳಗಿರುವ ಪರಮೇಶ್ವರನಿಗೆ ಸಮರ್ಪಣೆ ಮಾಡುತ್ತಿದ್ದೇನೆ ಎಂಬ ಭಾವನೆಯಿಂದ, ರಾಗದ್ವೇಷರಹಿತವಾಗಿ ಆಯಾ ಇಂದ್ರಿಯಗಳ ಮೂಲಕ ಅನುಭವಿಸುತ್ತಾರೆ. ಇದು ಕೂಡ ಒಂದು ಯಜ್ಞವೇ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ