ಗೀತೆ – 100 : ದೈವಯಜ್ಞದ ಬಗ್ಗೆ ತಿಳಿಯೋಣ

Gitacharya
Spread the love

ಶ್ರೀ ಮದ್ಭಗವದ್ಗೀತಾ : 100

25. ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ।
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪ-ಜುಹ್ವತಿ॥

ಅಪರೇ = ಜ್ಞಾನಸಾಧನೆಯಿಲ್ಲದ ಇತರರಾದ, ಯೋಗಿನಃ = ಕರ್ಮಯೋಗಿಗಳು, ದೈವಂ = ಆಯಾ ದೇವತೆಗಳನ್ನು ಪ್ರಸನ್ನ ಮಾಡಿಕೊಳ್ಳುವ, ಯಜ್ಞಂ = ಯಜ್ಞವನ್ನು, ಏವ = ಮಾತ್ರವೇ, ಪರ್ಯುಪಾಸತೇ = ಅನುಷ್ಠಾನ ಮಾಡುತ್ತಿದ್ದಾರೆ. ಅಪರೇ = ಜ್ಞಾನಾಸಕ್ತಿ ಇರುವ ಇನ್ನು ಕೆಲವರು ಯೋಗಿಗಳು, ಬ್ರಹ್ಮಾಗ್ನೌ = ಬ್ರಹ್ಮವೆಂಬ ಅಗ್ನಿಯಲ್ಲಿ, ಯಜ್ಞೇನ-ಏವ = ಉಪಾಧಿಯಿಂದ ಕೂಡಿದ ಜೀವಾತ್ಮನೆಂಬ ಸೌಟಿನಿಂದಲೇ, ಯಜ್ಞಂ = ಉಪಾಧಿರಹಿತನಾದ ಜೀವಾತ್ಮನನ್ನು, ಉಪಜುಹ್ವತಿ= ಆಹುತಿ ಮಾಡುತ್ತಿದ್ದಾರೆ.

ಸಾಧಾರಣ ಹೋಮರೂಪವಾದ ಯಜ್ಞಯಾಗಾದಿಗಳನ್ನು ಮಾಡುವ ಕರ್ಮಯೋಗಿಗಳು ವಿವಿಧ ದೇವತಾಶಕ್ತಿಗಳ ಪ್ರೀತಿಗೋಸ್ಕರ ಮಾತ್ರವೇ ಆಯಾ ಯಜ್ಞಗಳನ್ನು ಮಾಡುತ್ತಿರುತ್ತಾರೆ. ಅದಕ್ಕಾಗಿಯೇ, ಅವುಗಳನ್ನು ದೇವತಾ ಸಂಬಂಧವಾದ ಯಜ್ಞಗಳು ಅಥವಾ ದೈವಯಜ್ಞಗಳು ಎನ್ನುತ್ತಾರೆ. ಇದು ಕರ್ಮಮಾರ್ಗವು. ಇದಕ್ಕೆ ಭಿನ್ನವಾಗಿ ಇನ್ನು ಕೆಲವರು ಯೋಗಿಗಳು ಯಜ್ಞಪ್ರಕ್ರಿಯೆಯನ್ನು ಜ್ಞಾನಮಯವಾಗಿ ನಿರ್ವಹಿಸುತ್ತಾರೆ. “”ಯಜ್ಞವು” ಎಂಬ ಪದಕ್ಕೆ ಶಾಸ್ತ್ರಪರವಾಗಿ ಕೊಡುವ ನಿರ್ವಚನಗಳು ಹಾಗಿರಲಿ. ಅಗ್ನಿಯಲ್ಲಿ ಆಜ್ಯವನ್ನು ಹಾಕಿದರೆ ಆಜ್ಯವು ಅಗ್ನಿಯೇ ಆಗಿಬಿಡುತ್ತದೆ. ಹೀಗೆ ಹೋಮ ಮಾಡಲ್ಪಡುವ ಆಜ್ಯವು, ಹೋಮಕ್ಕೆ ಆಧಾರವಾಗಿರುವ ಅಗ್ನಿಯು, ಎರಡೂ ಸೇರಿ ಒಂದೇ ರೂಪವಾಗಿಬಿಡುವುದೇ ಯಜ್ಞವು. ಈ ನಿರ್ವಚನವನ್ನು ದೃಷ್ಟಿಯಲ್ಲಿಟ್ಟುಕೊಂಡ ಜ್ಞಾನಯೋಗಿಗಳು ತಾವು ಮಾಡುವ ಯಜ್ಞಪ್ರಕ್ರಿಯೆಗೆ ಆಧಾರವಾಗಿ “”ಪರಬ್ರಹ್ಮವು” ಎಂಬ ಅಗ್ನಿಯನ್ನೇ ಸ್ವೀಕರಿಸುತ್ತಾರೆ. ಅನಂತರ, ತಮ್ಮ ಜೀವಾತ್ಮನನ್ನು ಪರಿಶೀಲಿಸಿ, ಅದನ್ನು ಮನಸ್ಸು ಮೊದಲಾದ ಉಪಾಧಿಗಳಿಂದ ಕೂಡಿದ ಭಾಗವಾಗಿಯೂ, ಯಾವ ಉಪಾಧಿಗಳೂ ಇಲ್ಲದ ವಿಶುದ್ಧಭಾಗವಾಗಿಯೂ ಮಾನಸಿಕವಾಗಿಯೇ ವಿಭಜನೆ ಮಾಡುತ್ತಾರೆ. ಆಗ, ಉಪಾಧಿಸಹಿತವಾದ ಜೀವಾತ್ಮಭಾಗವನ್ನೇ ಹೋಮದ ಸೌಟಂತೆ ಭಾವಿಸಿ, ವಿಶುದ್ಧವಾದ ಜೀವಾತ್ಮಭಾಗವನ್ನು ಆಜ್ಯವಾಗಿ ಭಾವಿಸಿ, ಆ ಆಜ್ಯದಿಂದ ಹೋಮ ಮಾಡುತ್ತಾರೆ. ಆಗ, ಜೀವಾತ್ಮ ಹೋಗಿ ಪರಬ್ರಹ್ಮನಲ್ಲಿ ವಿಲೀನವಾಗಿಬಿಡುತ್ತದೆ. ಅಂದರೆ, “”ಅಲ್ಲಿರುವುದು ಉಪಾಧಿರಹಿತವಾದ ವಿಶುದ್ಧ ಪರಬ್ರಹ್ಮವು ಒಂದೇ. ಅದಕ್ಕೆ ಭಿನ್ನವಾಗಿ ಉಪಾಧಿಸಹಿತನಾದ ಜೀವಾತ್ಮನೆಂಬುವನು ಇಲ್ಲವೇ ಇಲ್ಲ” ಎಂಬ ಅನುಭವವನ್ನು ಹೊಂದುತ್ತಾರೆ.
ವಿವರಣೆ:
ಹಿಂದಿನ ಶ್ಲೋಕದಲ್ಲಿ ಹೇಳಿದ ಸಮ್ಯಗ್ದರ್ಶನದ ಮೇಲೆ ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ, ಹೋಮರೂಪವಲ್ಲದ ಇತರ ಯಜ್ಞಗಳು ಕೂಡ ಸಮ್ಯಗ್ದರ್ಶನ ಪ್ರಕ್ರಿಯೆಗೆ ಸಹಕಾರಮಾಡುತ್ತವೆ ಎಂದು ನಿರೂಪಿಸಬೇಕು. ಈ ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು
ಭಗವಂತನು ಇಲ್ಲಿಂದ 32ನೆಯ ಶ್ಲೋಕದವರೆಗೂ ವಿವಿಧ ಯಜ್ಞಗಳನ್ನು ಪ್ರಸ್ತಾಪಿಸುತ್ತಾ, ಅವುಗಳಿಂದ ಸಮ್ಯಗ್ದರ್ಶನವನ್ನು ಸಾಧಿಸುವ ಉಪಾಯಗಳನ್ನು ಉಪದೇಶಿಸುತ್ತಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ