*ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಬದುಕನ್ನು ಕಟ್ಟಿ ಕೊಳ್ಳಿರಿ: ಕೆ.ಎಂ. ಗಾಯತ್ರಿ*
ಮೈಸೂರು, ವಿದ್ಯಾರ್ಥಿಗಳು ಈ ಸಮಯವನ್ನು ಓದಿಗೆ ಮಾತ್ರ ಮೀಸಲಿಟ್ಟು ಆತ್ಮವಿಶ್ವಾಸವಿಟ್ಟುಕೊಂಡು ಪರಿಶ್ರಮದಿಂದ ಗುರಿ ಇಟ್ಟುಕೊಂಡು ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ನೀವೇ ನಿರ್ಧರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ತಿಳಿಸಿದರು.
ಕುವೆಂಪುನಗರದ ಬಿ.ಸಿ.ಎಂ. ಹಾಸ್ಟೆಲ್ ಆವರಣದಲ್ಲಿ ಸೋಮವಾರ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗು ಮೈಸೂರು ಜಿಲ್ಲಾ ಬಿ.ಸಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸಗಳ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಿ.ಇ.ಟಿ. ಕೌನ್ಸಿಲಿಂಗ್ ಪ್ರಕ್ರಿಯೆ ಕುರಿತ ಕಾರ್ಯಗಾರ ಹಾಗೂ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಈಗಿರುವಷ್ಟು ಸೌಲಭ್ಯಗಳು ಇಲ್ಲದಿದ್ದರೂ ಸಹ ಬಿ.ಸಿ.ಎಂ. ಹಾಸ್ಟೆಲ್ನಲ್ಲಿ ಓದಿದ ವಿದ್ಯಾರ್ಥಿಗಳು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಹೇಳುವ ವಿಷಯವನ್ನು ಸಂಗ್ರಹಿಸಿಕೊoಡು ನಿಮ್ಮದೇ ಆದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್, ಟಿ.ವಿ. ಹೊರಗೆ ಸುತ್ತಾಡುವ ಆಕರ್ಷಣೆಯಿಂದ ದೂರವಿದ್ದು 3 ರಿಂದ 4 ವರ್ಷ ಕಷ್ಟಪಟ್ಟು ಓದಿದರೆ ನಿಮ್ಮ ಬದುಕಿನ ದಿಕ್ಕೆ ಬದಲಾವಣೆಯಾಗುತ್ತದೆ. ನಿಮ್ಮ ತಂದೆತಾಯಿಯವರು ಕನಸನ್ನು ಕಟ್ಟಿಕೊಂಡು ನಿಮ್ಮನ್ನು ಹಾಸ್ಟೆಲ್ಗೆ ಕಳಿಸಿದ್ದಾರೆ. ನಿಲಯ ಪಾಲಕರು, ಅಧಿಕಾರಿಗಳು ನಿಮ್ಮ ಬಗ್ಗೆ ಕಾಳಜಿವಹಿಸಿ ಕೆಲಸ ಮಾಡುತ್ತಿದ್ದಾರೆ. ಬಿ.ಸಿ.ಎಂ. ಹಳೆ ವಿದ್ಯಾರ್ಥಿ ಸಂಘ ನಿಮ್ಮ ಭವಿಷ್ಯ ರೂಪಿಸಲು ಕಾರ್ಯಾಗಾರವನ್ನು ಮಾಡುತ್ತಿದ್ದಾರೆ. ಈ ಕಾರ್ಯಾಗಾರ ಯಶಸ್ವಿಯಾಗಲಿ ಎಂದರು.
ಮೈಸೂರು ಜಿಲ್ಲಾ ಬಿ.ಸಿ.ಎಂ. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಕೆ.ಎಂ.ಎಫ್.ನ ವ್ಯವಸ್ಥಾಪಕ ನಿರ್ದೇಶಕರು ಆದ ಬಿ. ಶಿವಸ್ವಾಮಿ ಮಾತನಾಡಿ ಹಿರಿಯರ ಸಲಹೆ ಮೇರೆಗೆ ಸಂಘವನ್ನು ಸ್ಥಾಪನೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಿದ್ದಾರೆ. ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಅರಿತು ಈ ಕಾರ್ಯಾಗಾರವನ್ನು ಮಾಡುತ್ತಿದ್ದೇವೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಂಕ ಕಡಿಮೆ ಬಂದಿದೆ ಎಂದು ಹತಾಶರಾಗಬಾರದು, ದುಃಖಪಡಬಾರದು. ಭಯ, ಆತಂಕ ಬಿಟ್ಟು ಮರಳಿಯತ್ನವ ಮಾಡಿದರೆ ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಎಂದು ತಿಳಾಸಿದರು.
ಹಠ, ಛಲ, ಧೈರ್ಯ ನಿಮಗಿದ್ದರೆ ಯಾವ ಪರೀಕ್ಷೆ ಬೇಕಾದರೂ ಎದುರಿಸಬಹುದು. ನಿಮ್ಮ ತಂದೆ ತಾಯಿ ನಿಮ್ಮ ಮೇಲೆ ಭರವಸೆ ಇಟ್ಟು ಓದಲು ಕಳುಹಿಸಿದ್ದಾರೆ. ಬಿ.ಸಿ.ಎಂ. ಹಾಸ್ಟೆಲ್ ವಿದ್ಯಾರ್ಥಿಗಳೆಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಆಗೀದ್ದೀರಿ. ನಾನು ಕೂಡ ಬಿ.ಸಿ.ಎಂ. ಹಾಸ್ಟೆಲ್ ವಿದ್ಯಾರ್ಥಿಯಾಗಿ ಶ್ರಮಪಟ್ಟು ಓದಿದ್ದರಿಂದ ಶಿಕ್ಷಕನಾಗಿ, ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಈಗ ಕೆ.ಎ.ಎಸ್. ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಈ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಎಂದರು.
ಸಂಪನ್ಮೂಲ ವ್ಯಕ್ತಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಡಾ. ಎ.ಎಸ್. ರವಿ ಮಾತನಾಡಿ ಪಿ.ಯು.ಸಿ. ವಿದ್ಯಾರ್ಥಿಗಳು 2 ವರ್ಷ ತಪಸ್ಸು ಮಾಡಬೇಕು. ನಾನು ಪರೀಕ್ಷೆ ಬರೆಯಬೇಕು ಎಂಬ ಮನಃಸ್ಥಿತಿ ಇರಬೇಕು. ನಾನು ಸಮರ್ಥನಿದ್ದೇನೆ ಎಂದು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮೆಡಿಕಲ್, ಇಂಜಿನಿಯರಿoಗ್ ಸೀಟ್ ಸಿಗಲಿಲ್ಲ ಎಂದು ನಿರಾಶರಾಗುವ ಅವಶ್ಯಕತೆ ಇಲ್ಲ. ಜೀವನವನ್ನು ರೂಪಿಸಿಕೊಳ್ಳಲು ಬಹಳಷ್ಟು ಕೋರ್ಸ್ಗಳಿವೆ. ಎನ್.ಎಸ್.ಡಿ.ಸಿ. ವೆಬ್ಸೈಟ್ಗಳಲ್ಲಿ 600 ಕೋರ್ಸ್ಗಳಿಗೆ ನಿಮ್ಮ ಆಸಕ್ತಿಗೆ ಅನುಗುಣವಾಗಿ ಓದಿ ಗುರಿ ಸಾಧಿಸಿ ಎಂದರು.
ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್, ಹುಣಸೂರು ತಾಲ್ಲೂಕು ತಹಸೀಲ್ದಾರ್ ಮಂಜುನಾಥ್, ಡಾ. ಜಗದೀಶ್, ತಾಲ್ಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ, ಸಿಂಡಿಕೇಟ್ ಸದಸ್ಯ ಮಹೇಶ್ ಸೋಸಲೆ, ಅಹಿಂದ ಜವರಪ್ಪ, ಬ್ಯಾಡ್ರಳ್ಳಿ ನಂದೀಶ, ಕಾರ್ಯದರ್ಶಿ ಬಿ.ಪಿ. ರಾಜೇಶ್, ಖಜಾಂಚಿ ರುಕ್ಮಾಂಗದ, ನವೀನ್, ನಿಲಯಪಾಲಕರಾದ ಜಗದೀಶ್ ಕೋರಿ, ನಾಗರಾಜ್ ವಡ್ಗಲ್, ಎಲ್ಲಾ ನಿಲಯ ಪಾಲಕರು ವಿದ್ಯಾರ್ಥಿಗಳು ಹಾಜರಿದ್ದರು.