ಡಿಸೆಂಬರ್ 3 ನೇ ವಾರದೊಳಗೆ ಅಂತಿಮ ಪಟ್ಟಿಯನ್ನು ಬಿಡುಗಡೆಗೆ ಡಿಸಿ ಸೂಚನೆ

Spread the love

 

*ಯೋಜನೆಗಳು ಜನರಿಗೆ ತಲುಪಲಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸೇರಲಿ*

– *ಜಿ. ಲಕ್ಷ್ಮೀಕಾಂತ ರೆಡ್ಡಿ*

ಮೈಸೂರು,ಡಿ.02:- ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಶೀಘ್ರವಾಗಿ ಅವರಿಗೆ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಜಿ. ಲಕ್ಷೀಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಇಲಾಖೆಯ ವಿವಿಧ ಯೋಜನೆಗಳಾದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ-2005, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ, ಉದ್ಯೋಗಸ್ಥ ಮಹಿಳೆಯರ ವಸತಿನಿಲಯಗಳ ಕಾರ್ಯನಿರ್ವಹಣೆ. ಕೇಂದ್ರ ಪುರಸ್ಕೃತ ಮಿಷನ್ ಶಕ್ತಿ ಯೋಜನೆ ಅನುಷ್ಠಾನ, ಸಾಂತ್ವನ ಯೋಜನೆ ಹಾಗೂ ಸ್ತ್ರೀಶಕ್ತಿ ಯೋಜನೆಗಳ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಂಗನವಾಡಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಡಿಸೆಂಬರ್ 3 ನೇ ವಾರದೊಳಗೆ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಅಭ್ಯರ್ಥಿಗೆ ಯಾವುದೇ ರೀತಿಯ ಅಕ್ರಮ ಆಗದಂತೆ ನೋಡಿಕೊಂಡು ಅರ್ಹರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ಕೆಲಸ ನಿರ್ವಹಿಸುತ್ತಿರುವ 8 ಸಾಂತ್ವನ ಕೇಂದ್ರಗಳಿದ್ದು, ಇಲ್ಲಿ ಲೈಂಗಿಕ ಕಿರುಕುಳ, ಕೌಟುಂಬಿಕ ಕಿರುಕುಳ ಹಾಗೂ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರಿಗೆ ಕೌನ್ಸಿಲಿಂಗ್ ಮೂಲಕ ಪರಿಹಾರ ನೀಡುವುದು ಹಾಗೂ ಆಶ್ರಯವನ್ನು ನೀಡಿ ಸಂತೈಸಲಾಗುತ್ತಿದ್ದು, ಇದರಿಂದ ಜಿಲ್ಲೆಯ ಹಲವಾರು ಹೆಣ್ಣು ಮಕ್ಕಳು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಈ ರೀತಿಯ ಸಂಸ್ಥೆಗಳು ಇನ್ನೂ ಹೆಚ್ಚಿನ ಕಾರ್ಯನಿರ್ವಾಹಿಸಲು ಮುಂದಾಗಬೇಕು ಎಂದು ಹೇಳಿದರು.

ಸರ್ಕಾರೇತರ ಸಂಸ್ಥೆಗಳು ಪ್ರಾರಂಭಿಸಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಲ್ಲಿ ತಮ್ಮಲಿರುವ ಅನುದಾನದ ಮಟ್ಟದಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿ ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಬೇಕು. ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಗಳು ಕಂಡುಬಂದರೆ ಅದರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಸಾಗಾಣಿಕೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಕುಮಾರಸ್ವಾಮಿ ಪಿ.ಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಗಳು ಉಪಸ್ಥಿತರಿದ್ದರು.