*ಕೇತುಪುರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತ್ ಸಿಇಓ ಧಿಡೀರ್ ಭೇಟಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ*
ಮೈಸೂರು ಡಿ.12 ಇಂದು ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ. ಗಾಯಿತ್ರಿರವರು ಧಿಡೀರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ಕೇತುಪುರ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಸ್ಥಾವರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸ್ಥಾವರದ ಜಾಕ್ ವೆಲ್ ಸುತ್ತಲು ಸ್ವಚ್ಛಗೊಳಿಸಿ, ಜಾಕ್ ವೆಲ್ ಸುತ್ತಲು ರಿಟೈನಿಂಗ್ ವಾಲ್ ನಿರ್ಮಿಸುವಂತೆ ತಿಳಿಸಿದರು. ಪ್ಯಾನಲ್ ಬೋರ್ಡ್ ದುರಸ್ತಿಯಾಗಿದ್ದು ಕೂಡಲೇ ಸರಿಪಡಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ನೀರಿನ ಶುದ್ಧಿಕರಣ ಘಟಕವು ಅರಣ್ಯದಿಂದ ಸುತ್ತುವರೆದಿದ್ದು ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿನ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಘಟಕದ ಸುತ್ತ ಸೋಲಾರ್ ಫೆನ್ಸಿಂಗ್ ಅಳವಡಿಸಿಕೊಳ್ಳುವಂತೆ ಸೂಚಿಸಿದರು.
ಮುಖ್ಯ ರಸ್ತೆಯಿಂದ ನೀರಿನ ಶುದ್ಧಿಕರಣ ಘಟಕಕ್ಕೆ ಬರುವ ರಸ್ತೆಯು ಅರಣ್ಯ ಇಲಾಖೆಯ ಸುಪರ್ದಿಗೆ ಬರುವುದರಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದು ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮಸ್ಥರಿಗೆ ಬೋರ್ ವೆಲ್ ನೀರನ್ನು ಕೊಡುವುದರ ಬದಲಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸರಬರಾಜು ಮಾಡುವ ನದಿ ನೀರನ್ನು ಟ್ಯಾಂಕುಗಳಿಗೆ ಏರಿಸಿ ಅದೇ ನೀರನ್ನು ಜನರಿಗೆ ಕೊಡುವಂತೆ ಸೂಚಿಸಿ, ಬೋರ್ ವೆಲ್ ನೀರನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಶುದ್ಧವಾದ ಸಿಹಿ ನೀರನ್ನು ಕುಡಿಯುವಂತೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ಪಿಡಿಒ ರವರಿಗೆ ಸೂಚಿಸಿದರು.
ಗ್ರಾಮದ ಮನೆ ಮನೆಗೆ ಭೇಟಿ ನೀಡುವ ಮೂಲಕ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕುಡಿಯುವ ನೀರು ತಲುಪುತ್ತಿರುವ ಕುರಿತು ಪರಿಶೀಲಿಸಿದರು.
ನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಇ ಹಾಜರಾತಿಯನ್ನು ವೆಬ್ ತಂತ್ರಾಂಶದಲ್ಲಿ ಪರಿಶೀಲಿಸಿ ತಡವಾಗಿ ಹಾಜರಾತಿ ನಮೂದಿಸುತ್ತಿರುವ ಸಿಬ್ಬಂದಿಗಳಿಗೆ ನೋಟಿಸ್ ನೀಡಲು ಕಾರ್ಯನಿರ್ವಾಹಕ ಸೂಚಿಸಿದರು.
ತೆರಿಗೆ ವಸೂಲಾತಿ ಪರಿಶೀಲಿಸಿ ವಸೂಲಾತಿ ಕುಂಠಿತವಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿ ನೋಟಿಸ್ ನೀಡುವಂತೆ ಸೂಚಿಸಿದರು. ಗ್ರಾಮ ಪಂಚಾಯಿತಿಯ ಸುತ್ತಲು ಸ್ವಚ್ಛತೆಯನ್ನು ನಿರ್ವಹಿಸಿಲ್ಲದ್ದರಿಂದ ಗ್ರಾಮ ಪಂಚಾಯಿತಿಯ ಸುತ್ತಲು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ರಸ್ತೆಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯನ್ನು ಕಾಪಾಡುವಂತೆ ಪಿಡಿಒರವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಟ್ಯಾಂಕ್ ಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಹಳೇ OHT ಟ್ಯಾಂಕ್ ಗಳಿಗೆ ವಾಲ್ ಚೇಬಂರ್ ಅನ್ನು ನಿರ್ಮಿಸುವುದು, ಎಲ್ಲಾ ಟ್ಯಾಂಕುಗಳಿಗೂ ಲೈಟನಿಂಗ್ ಅರೆಸ್ಟರ್ ಅನ್ನು ಕಡ್ಡಾಯವಾಗಿ ಅಳವಡಿಸುವುದು ಹಾಗೂ ಟ್ಯಾಂಕ್ ಹತ್ತಲು ನೀರು ಘಂಟಿಗಳಿಗೆ ಅನುಕೂಲವಾಗುವಂತೆ ಲ್ಯಾಡರ್ ಗಳಿಗೆ ರೇಲಿಂಗ್ಸ್ ಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮವಹಿಸುವಂತೆ ಸೂಚಿಸಿದರು. ಕಾಲಕಾಲಕ್ಕೆ ಕುಡಿಯುವ ನೀರಿನ್ನು ಎಫ್ ಟಿ ಕೆ ಕಿಟ್ ಮೂಲಕ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಸ್ವತಃ ತಾವೇ ಸೇವಿಸಿ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಕಾಲಕಾಲಕ್ಕೆ ಮಕ್ಕಳಿಗೆ ತೂಕ, ಎತ್ತರ, ಆರೋಗ್ಯ ತಪಾಸಣೆ ನಡೆಸುವಂತೆ ತಿಳಿಸಿದರು ಅಂಗನವಾಡಿ ಕೇಂದ್ರದಲ್ಲಿ 3 ವರ್ಷದ ಒಳಗಿನ ಮಕ್ಕಳು ಕಂಡು ಬಂದಿದ್ದರಿಂದ ಆ ಮಕ್ಕಳನ್ನು ಕೂಸಿನ ಮನೆಗೆ ಸೇರಿಸುವಂತೆ ಸೂಚಿಸಿದರು.
ಕೇತುಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೌಚಾಲಯ, ಆಟದ ಮೈದಾನ, ಶಾಲಾ ಕಾಂಪೌಂಡ್, ಶಾಲಾ ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳಿಗೆ ಪರಿಸರ, ನೈರ್ಮಲ್ಯ ಕುರಿತು ಮಾಹಿತಿ ನೀಡಿ ಎಲ್ಲಾ ಮಕ್ಕಳು ಒಂದೊಂದು ಗಿಡವನ್ನು ತಮ್ಮ ತಮ್ಮ ಮನೆಯ ಜಾಗದಲ್ಲಿ ನೀಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸೇನಾಪತಿಹಳ್ಳಿ ಗ್ರಾಮದ ಹಾಲಿನ ಡೈರಿಯ ಮುಂದೆ 15ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣವಾಗಿದ್ದ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಂಜಿತ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ. ಎಸ್. ಅನಂತರಾಜು, ಪಿ ಆರ್ ಇ ಡಿ ಇಲಾಖೆಯ ಇ ಇ ವೀರೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ ಇ ಇ ಹರ್ಷದ್ ಪಾಷಾ, ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ, ಪಿಡಿಒ ರವೀಂದ್ರ, ಕಾರ್ಯದಶಿ ಆಶಾಲತಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು