ಗೀತೆ – 45 : ಇಂದ್ರೀಯಗಳಿಗೆ ಭೋಗದ ಮೇಲಿರುವ ತೃಷ್ಣೆ ಬಿಟ್ಟಿರುವುದಿಲ್ಲ

Gitacharya
Spread the love
  • ಶ್ರೀಮದ್ಭಗವದ್ಗೀತಾ : 45

58.ಯದಾ ಸಂಹರತೇ ಚಾಯಂ ಕೂರ್ಮೋಽಂಗಾನೀವ ಸರ್ವಶಃ। ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥

ಅಯಂ = ಈ ಮುನಿಯು, ಯದಾ = ಯಾವಾಗ, ಇಂದ್ರಿಯಾಣಿ = ಇಂದ್ರಿಯಗಳನ್ನು, ಇಂದ್ರಿಯಾರ್ಥೇಭ್ಯಃ = ಆಯಾ ಇಂದ್ರಿಯಗಳ ವಿಷಯಗಳಿಂದ, ಕೂರ್ಮಃ = ಆಮೆಯು, ಅಂಗಾನಿ-ಇವ = ತನ್ನ ಅವಯವಗಳನ್ನು ಎಳೆದುಕೊಳ್ಳುವಂತೆ, ಸರ್ವಶಃ = ಎಲ್ಲಾ ಕಡೆಯಿಂದಲೂ, ಚ = ಕೂಡ, ಸಂಹರತೇ = ಹಿಂದಕ್ಕೆ ಎಳೆದುಕೊಳ್ಳುವನೋ, (ತದಾ = ಆಗ) ತಸ್ಯ = ಆ ಮುನಿಯ, ಪ್ರಜ್ಞಾ = ವಿವೇಕಜನಿತವಾದ ಜ್ಞಾನವು, ಪ್ರತಿಷ್ಠಿತಾ = ಸ್ಥಿರವಾಗಿ ನಿಂತಂತೆ ಆಗುವುದು.

ಅರ್ಜುನನೆ! ಪ್ರತ್ಯಾಹಾರ ಪ್ರಕ್ರಿಯೆಯಲ್ಲಿ ಸಿದ್ಧನಾದ ಯೋಗಿಯು ಮಾಮೂಲು ಯೋಗಪ್ರಕ್ರಿಯೆಗಳಿಂದಲ್ಲದೆ, ಆತ್ಮತತ್ತ್ವಮನನಪ್ರಕ್ರಿಯೆಯಿಂದ ತನ್ನ ಇಂದ್ರಿಯಗಳನ್ನು ತನ್ನ ಕೋರಿಕೆಯಂತೆ, ಆಯಾ ವಿಷಯಗಳಿಂದ ಹಿಂದಕ್ಕೆ (ಒಳಕ್ಕೆ), ಎಳೆದುಕೊಳ್ಳಬಲ್ಲನೋ, ಅದು ಕೂಡ ಆಮೆಯು ತನ್ನ ಇಂದ್ರಿಯಗಳನ್ನು ಉಪಸಂಹರಿಸಿಕೊಂಡಷ್ಟು ಸುಲಭವಾಗಿ ಮಾಡಬಲ್ಲವನಾಗುತ್ತಾನೋ, ಅದು ಕೂಡ ಒಂದು ಇಂದ್ರಿಯವನ್ನು ಮಾತ್ರವಲ್ಲದೆ, ಎಲ್ಲಾ ಇಂದ್ರಿಯಗಳನ್ನೂ ಏಕಕಾಲದಲ್ಲಿ ಉಪಸಂಹರಿಸಬಲ್ಲವನಾಗುತ್ತಾನೋ, ಅಂತಹ ಮುನಿಯು ಸ್ಥಿತಪ್ರಜ್ಞನಾಗಿರುತ್ತಾನೆ.
ಅವತಾರಿಕೆ:
ಹಿಂದಿನ ಶ್ಲೋಕಗಳಲ್ಲಿ ಭಗವಂತನು ಬಳಸಿದ್ದ “ಮುನಿ’ ಎಂಬ ಪದದ ಅರ್ಥವನ್ನು ಮುಂದಿನ ಮೂರು ಶ್ಲೋಕಗಳಲ್ಲಿ ತಾನೇ ವಿವರಿಸಲಿದ್ದಾನೆ.

59.ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ।
ರಸವರ್ಜಂ ರಸೋಽಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ॥

ನಿರಾಹಾರಸ್ಯ = ಆಯಾ ಇಂದ್ರಿಯಗಳಿಗೆ ಆಯಾ ವಿಷಯಗಳನ್ನು ಆಹಾರವಾಗಿ ಸ್ವೀಕರಿಸದೇ ಇರುವಂತಹ, ದೇಹಿನಃ = ಮನುಷ್ಯನಿಗೆ, ವಿಷಯಾಃ = ಶಬ್ದಾದಿ ವಿಷಯಗಳನ್ನು ಗ್ರಹಿಸುವ ಇಂದ್ರಿಯಗಳು, ರಸವರ್ಜಂ = ವಿಷಯಗಳ ಮೇಲಿನ ತೃಷ್ಣೆಯನ್ನು ಬಿಟ್ಟು, ವಿನಿವರ್ತಂತೇ = ವಿಷಯಗಳಿಂದ ಹಿಂದಕ್ಕೆ ಮರಳಿಹೋಗುತ್ತಿವೆ. (ಆದರೆ), ಪರಂ = ಪರತತ್ತ್ವವನ್ನು, ದೃಷ್ಟ್ವಾ = ಹಿಡಿದುಕೊಂಡು (ಕೊಂಡರೆ), ಅಸ್ಯ = ಈ ಮನುಷ್ಯನ, ರಸಃ ಅಪಿ = ವಿಷಯತೃಷ್ಣೆಯು ಕೂಡ, ನಿವರ್ತತೇ = ಹಿಂದಕ್ಕೆ ಮರಳಿ ಹೋಗುತ್ತದೆ.

ಅರ್ಜುನನೆ! ಒಬ್ಬಾನೊಬ್ಬ ಸಾಧಕನು ಮೊಂಡುತನದಿಂದ ಆಗಲೀ, ರೋಗಾದಿಗಳಿಂದ ಉಂಟಾಗುವ ನಿಶ್ಶಕ್ತಿಯಿಂದಾಗಲೀ, ಇಂದ್ರಿಯಸುಖಗಳಿಂದ ದೂರವಿರಬಹುದು. ಹಾಗೆ ಮೊಂಡಾಗಿ ಸಾಧನೆಯನ್ನು ಮಾಡಿದರೆ ಇಂದ್ರಿಯಗಳು ಆಯಾ ಸುಖಭೋಗಗಳನ್ನು ಬಿಟ್ಟುಬಿಟ್ಟಂತೆಯೇ ಕಾಣುತ್ತವೆ. ಆದರೆ, ಆ ಇಂದ್ರಿಯಗಳಿಗೆ ಭೋಗಗಳ ಮೇಲಿರುವ ತೃಷ್ಣೆ ಬಿಟ್ಟು ಹೋಗಿರುವುದಿಲ್ಲ. ಅದೇ ಸಾಧಕನು ಮೊದಲು ಪರಮಾತ್ಮ ದರ್ಶನವನ್ನು ಎಷ್ಟೋ ಒಂದಷ್ಟು ಸಂಪಾದಿಸಿ, ಆ ಅನುಭವದಿಂದ ಇಂದ್ರಿಯಗಳನ್ನು ನಿಗ್ರಹಿಸಬೇಕೆಂದು ಪ್ರಯತ್ನಿಸಿದರೆ, ಆತನ ಇಂದ್ರಿಯಗಳಿಗೆ ಸುಖಭೋಗಗಳ ಮೇಲಿರುವ ಆಸಕ್ತಿಯು ಪೂರ್ತಿಯಾಗಿ ಹೋಗಿಬಿಡುತ್ತದೆ. ಅದು ತೊಲಗಿಹೋದರೆ, ಆತನಿಗೆ ಇಂದ್ರಿಯಜಯವು ಅಪ್ರಯತ್ನವಾಗಿಯೇ ಸಿದ್ಧಿಸುತ್ತದೆ.

60. ಯತತೋ ಹ್ಯಪಿ ಕೌಂತೇಯ! ಪುರುಷಸ್ಯ ವಿಪಶ್ಚಿತಃ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ॥

ಕೌಂತೇಯ = ಎಲೈ ಅರ್ಜುನನೆ!, ಪ್ರಮಾಥೀನಿ = ಮಥಿಸುವಂತಹ ಸ್ವಭಾವವುಳ್ಳ, ಇಂದ್ರಿಯಾಣಿ = ಇಂದ್ರಿಯಗಳು, ಯತತಃ = ಪ್ರಯತ್ನಶೀಲನೂ, ವಿಪಶ್ಚಿತಃ = ಮೇಧಾವಿಯೂ ಆದ, ಪುರುಷಸ್ಯ = ಮಾನವನ, ಮನಃ-ಅಪಿ = ಮನಸ್ಸನ್ನು ಕೂಡ, ಪ್ರಸಭಂ = ಬಲಾತ್ಕಾರವಾಗಿ, ಹರಂತಿ = ಕಳ್ಳತನ ಮಾಡಿಬಿಡುತ್ತಿವೆ (ಆಕರ್ಷಿಸುತ್ತಿವೆ), ಹಿ = ಇದು ನಿಶ್ಚಯವು.

ಎಲೈ ಅರ್ಜುನನೆ! ಮಾನವನು ಮೇಧಾವಿಯಾಗಿ, ಬುದ್ಧಿಯಿಂದ ತತ್ತ್ವವಿಷಯವನ್ನು ಗ್ರಹಿಸಿದರೆ ಸಾಲದು. ಸ್ವಲ್ಪಮಟ್ಟಿಗೆ ಪ್ರಯತ್ನಮಾಡುವ ಸ್ವಭಾವವಿದ್ದರೂ ಸಾಲದು. ಏಕೆಂದರೆ ಜೀವನವನ್ನು ಮಥಿಸಿಬಿಡುತ್ತಾ ಇರುವುದೇ ಇಂದ್ರಿಯಗಳ ಸ್ವಭಾವವು. ಅವುಗಳಿಗೆ ಅಷ್ಟೊಂದು ಬಲವಿರುತ್ತದೆ. ಅದಕ್ಕಾಗಿಯೇ, ಅವುಗಳು ಸಾಧಕರ ಮನಸ್ಸನ್ನು ಬಹಿರಂಗವಾಗಿಯೇ ಪಕ್ಕದಾರಿಗೆ ಸೆಳೆಯುತ್ತಿರುತ್ತವೆ.

(ಮುಂದುವರೆಯುವುದು )

ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ