ಶ್ರೀ ಮದ್ಭಗವತ್ಗೀತೆ : 15
ಅವತಾರಿಕೆ :
ಇನ್ನು ಸಂಜಯನು ಪಾಂಡವಪಕ್ಷದ ಪ್ರಮುಖರ ಹೆಸರುಗಳನ್ನು ತಾನೇ ಹೇಳುತ್ತಾ, ಅವರ ಶಂಖನಾದಗಳನ್ನು ಕೂಡಾ ವರ್ಣಿಸಲಿದ್ದಾನೆ.
17.ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ।
ದೃಷ್ಟದ್ಯುಮ್ಮೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ।।
18.ದ್ರುಪದೋ ದ್ರಪದೇಯಾಶ್ಚ ಸರ್ವಶಃ ಪೃಥಿವೀಪತೇ ।
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್ ॥
ಪೃಥಿವೀಪತೇ = ಎಲೈ ಧೃತರಾಷ್ಟ್ರ ಮಹಾರಾಜಾ!, ಪರಮೇಶ್ವಾಸಃ = ಶ್ರೇಷ್ಠ
ಧನುರ್ಧಾರಿಯಾದ, ಕಾಶ್ಯಃ-ಚ = ಕಾಶೀರಾಜನೂ, ಮಹಾರಥಃ = ಮಹಾರಥನಾದ, ಶಿಖಂಡೀ-ಚ = ಶಿಖಂಡಿಯೂ, ಧೃಷ್ಟದ್ಯುಮ್ನಃ = ಧೃಷ್ಟದ್ಯುಮ್ನನೂ, ವಿರಾಟಃ-ಚ = ವಿರಾಟನೂ, ಅಪರಾಜಿತಃ = ಸೋಲಿಲ್ಲದ, ಸಾತ್ಯಕಿಃ ಚ = ಸಾತ್ಯಕಿಯೂ, ದ್ರುಪದಃ ದ್ರುಪದನೂ, ದೌಪದೇಯಾಃ-ಚ = ದೌಪದೀಪುತ್ರರೂ, ಮಹಾಬಾಹುಃ = ಮಹಾಬಾಹುಬಲವುಳ್ಳ, ಸೌಭದ್ರಃ-ಚ = ಸುಭದ್ರಾಪುತ್ರನಾದ ಅಭಿಮನ್ಯುವೂ, ಸರ್ವಶಃ ಎಲ್ಲಾ ಕಡೆಯಿಂದಲೂ, ಪೃಥಕ್ ಪೃಥಕ್ =ಬೇರೆಬೇರೆಯಾಗಿ, ಶಂಖಾನ್ = ಶಂಖಗಳನ್ನು, ದಧ್ಮುಃ = ಊದಿದರು.
ಎಲೈ ಧೃತರಾಷ್ಟ್ರ ಮಹಾರಾಜನೆ! ಕಾಶೀರಾಜನೂ, ಶಿಖಂಡಿಯೂ, ಧೃಷ್ಟದ್ಯುಮ್ನನೂ, ವಿರಾಟನೂ, ಸಾತ್ಯಕಿಯೂ, ದ್ರುಪದನೂ, ದೌಪದೀಪುತ್ರರೂ,
ಅಭಿಮನ್ಯುವೂ, ಬೇರೆ ಬೇರೆಯಾಗಿ ಶಂಖಗಳನ್ನು ಪೂರಿಸಿದರು.
19.ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ ।
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್!!
ತುಮುಲಃ = ತೀವ್ರವು, ಘೋರವು ಆದ, ಸಃ-ಘೋಷಃ = ಆ ಗದ್ದಲವು, ನಭಃ – ಚ = ಆಕಾಶವನ್ನೂ, ಪೃಥಿವೀಂ-ಚ ಏವ = ಭೂಮಿಯನ್ನೂ ಕೂಡ, ವ್ಯನುನಾದಯನ್ = ಮಾರ್ದನಿಗೊಡುತ್ತಾ, ಧಾರ್ತರಾಷ್ಟ್ರಾಣಾಂ = ಧೃತರಾಷ್ಟ್ರನ ಪುತ್ರರಾದ ಕೌರವರ, ಹೃದಯಾನಿ = ಹೃದಯಗಳನ್ನು , ವ್ಯದಾರಯತ್ = ಸೀಳಿತು.
ಪಾಂಡವಪಕ್ಷೀಯರು ಮಾಡಿದ ಆ ಶಂಖಗಳ ಧ್ವನಿಯು ಭೂಮಿಯನ್ನೂ, ಆಕಾಶವನ್ನೂ ಸಹ ತುಂಬಿಕೊಂಡು ಭಯಂಕರವಾಗಿ ಮಾರ್ದನಿಗೂಡುತ್ತಾ ನಿನ್ನ ಮಕ್ಕಳ ಹೃದಯಗಳನ್ನು ನಡುಗಿಸಿತು – ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳುತ್ತಿದ್ದಾನೆ.
20.ಅಥ ವ್ಯವಸ್ಥಿತಾನ್ ದೃಷ್ಟಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ।
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ||
21.ಹೃಷೀಕೇಶಂ ತದಾ ವಾಕ್ಯಂ ಇದಮಾಹ ಮಹೀಪತೇ!!
ಮಹೀಪತೇ = ಎಲೈ ಮಹಾರಾಜನೆ!, ಅಥ- ಆಮೇಲೆ, ಶಸ್ತ್ರ ಸಂಪಾತೇ = ಶಸ್ತ್ರ ಪ್ರಯೋಗವು, ಪ್ರವೃತ್ತೇ = ಪ್ರಾರಂಭವಾಗುತ್ತಿರಲು, ಕಪಿಧ್ವಜಃ ಹನುಮಂತನೇ ಬಾವುಟದ ಗುರುತಾಗಿ ಇರುವಂತಹ, ಪಾಂಡವಃ = ಅರ್ಜುನನು, ವ್ಯವಸ್ಥಿತಾನ್ ಯುದ್ಧಕ್ಕಾಗಿ ಅಲ್ಲಿ ಸಿದ್ಧವಾಗಿ ನಿಂತಿದ್ದ, ಧಾರ್ತರಾಷ್ಟ್ರಾನ್ = ಕೌರವರನ್ನು, ದೃಷ್ಟ್ವ= ನೋಡಿ, ಧನುಃ = ತನ್ನ ಧನುಸ್ಸನ್ನು, ಉದ್ಯಮ್ಯ = ಮೇಲಕ್ಕೆ ಎತ್ತಿ ಹಿಡಿದುಕೊಂಡು, ಹೃಷೀಕೇಶಂ = ಶ್ರೀಕೃಷ್ಣನನ್ನು ಕುರಿತು, ತದಾ = ಆಗ, ಇದಂ ವಾಕ್ಯಂ ಈ ಮಾತನ್ನು, ಆಹ = ಹೇಳಿದನು.
ಹೇ ಮಹಾರಾಜನೆ! ಈ ಪ್ರಕಾರ ಎರಡು ಪಕ್ಷದವರೂ ಯುದ್ಧಕ್ಕಾಗಿ ಸಿದ್ದರಾಗುತ್ತಾ, ಆಯುಧಪ್ರಯೋಗದ ಸಮಯವು ಒದಗಿ ಬರುತ್ತಿರುವಾಗ ಕಪಿಧ್ವಜನಾದ ಅರ್ಜುನನು ತನ್ನ ಧನುಸ್ಸನ್ನು ಎತ್ತಿ ಹಿಡಿದುಕೊಂಡು ಶತ್ರು ಪಕ್ಷವನ್ನು ಪರಿಶೀಲಿಸಿ, ಶ್ರೀಕೃಷ್ಣನನ್ನು ಕುರಿತು ಹೀಗೆ ಹೇಳಿದನು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ